Belagavi: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ ಮತ್ತೆ ಆರಂಭ: ಇದು 6ನೇ ಹಂತದ ಚಳವಳಿ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ ಮತ್ತೆ ಆರಂಭ: ಇದು 6ನೇ ಹಂತದ ಚಳವಳಿ
ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕೆಂಬ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದ್ದು, ಬೆಳಗಾವಿಯಲ್ಲಿ 6ನೇ ಹಂತದ ಹೋರಾಟವನ್ನು ಆರಂಭಿಸಲಾಗಿದೆ

ಬೆಳಗಾವಿ (ಸೆ.10): ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕೆಂಬ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದೆ. ಈಗಾಗಲೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ತೀವ್ರ ಪ್ರತಿಭಟನೆ ಮತ್ತು ಧರಣಿ ಸತ್ಯಾಗ್ರಹದ ಮೂಲಕ ಸರ್ಕಾರವನ್ನು ನಡುಗಿಸಿ 2ಡಿ ಮೀಸಲಾತಿ ಪಡೆದಿದ್ದರೂ ಅದನ್ನು ಒಪ್ಪದೇ 2ಎ ಮೀಸಲಾತಿಗಾಗಿ ಹೋರಾಟ ಆರಂಭಿಸಿದೆ.

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಲಿಂಗಾಯತ ಉಪಪಂಗಡಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಶಿಫಾರಸಿಗೆ ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಆರನೇ ಹಂತದ ಹೋರಾಟವನ್ನು ಆರಂಭಿಸಲಾಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಶ್ರೀಗಳು ಮೀಸಲಾತಿ ಪ್ರತಿಭಟನಾ ಚಳುವಳಿಗೆ ಚಾಲನೆ ನೀಡಿದರು. 

ನಿಪ್ಪಾಣಿಯ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಸ್ವಾಮೀಜಿಗಳ ಮೆರವಣಿಗೆ ಮಾಡಿದರು. ಈ ವೇಳೆ ಛತ್ರಪತಿ ಶಿವಾಜಿ ಮಹಾರಾಜ ಸಾಂಸ್ಕೃತಿಕ ಭವನಕ್ಕೆ ಆಗಮಿಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಲಿಂಗಾಯತರ ಮೀಸಲಾತಿ ಕುರಿತು ಸಮಾವೇಶ ನಡೆಸಲಿದ್ದಾರೆ. ಇನ್ನು ಸಮಾವೇಶದ ಬಳಿಕ ರಾಷ್ಟ್ರೀಯ ಹೆದ್ದಾರಿ 4ರವರೆಗೆ ಪಾದಯಾತ್ರೆಯನ್ನು ಮಾಡಲಿದ್ದಾರೆ. ಬಳಿಕ ರಾಷ್ಟ್ರೀಯ ಹೆದ್ದಾರಿ 4ರಲ್ಲಿಯೇ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಲಾಗತ್ತಿದೆ. ಇನ್ನು ಸಮಾವೇಶಕ್ಕೆ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಿಪ್ಪಾಣಿ ನಗರದಾದ್ಯಂತ ಪೊಲೀಸ್ ಬಿಗಿ ಭದ್ರತೆ ಒದಗಿಸಿದ್ದಾರೆ.

Post a Comment

0 Comments