ಕಿತ್ತೂರು ಉತ್ಸವ: ಅ.3 ರಂದು ಕಿತ್ತೂರಿನಲ್ಲಿ ಸಭೆ
----------------------------------
ಐದು ಕೋಟಿ ರೂಪಾಯಿ ಅನುದಾನಕ್ಕೆ ಪ್ರಸ್ತಾವನೆ ಕಳಿಸಲು ನಿರ್ಧಾರ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಬೆಳಗಾವಿ, ಸೆ.26(ಕರ್ನಾಟಕ ವಾರ್ತೆ): "ಕಳೆದ ವರ್ಷ ಸರಕಾರವು ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಘೋಷಿಸಿ ಎರಡು ಕೋಟಿ ರೂಪಾಯಿ ಅನುದಾನ ನೀಡಿತ್ತು. ಅದೇ ರೀತಿ ಈ ಬಾರಿ ಐದು ಕೋಟಿ ರೂಪಾಯಿ ಅನುದಾನ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು" ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಕಿತ್ತೂರು ಉತ್ಸವದ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ(ಸೆ.26) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಬಾರಿ ಐದು ಕೋಟಿ ರೂಪಾಯಿ ಅನುದಾನ ಕೋರಿ ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ ಅವರು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಈ ಬಾರಿ ಕೂಡ ಕಿತ್ತೂರಿನಲ್ಲಿ ಒಂದಕ್ಕಿಂತ ಹೆಚ್ಚು ವೇದಿಕೆ ನಿರ್ಮಾಣ ಮಾಡುವುದರ ಜತೆಗೆ ಕಾಕತಿ ಗ್ರಾಮದಲ್ಲಿ ಕೂಡ ವೇದಿಕೆ ನಿರ್ಮಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಕಳೆದ ಬಾರಿಯಂತೆ ವೀರಜ್ಯೋತಿ ಯಾತ್ರೆಯು ರಾಜ್ಯದಾದ್ಯಂತ ಸಂಚರಿಸಲು ಹಾಗೂ ಪ್ರವಾಸಿತಾಣಗಳಲ್ಲಿ ಕೂಡ ಸಂಚರಿಸುವಂತೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಉತ್ಸವವನ್ನು ಪ್ರತಿವರ್ಷದಂತೆ ಅಚ್ಚುಕಟ್ಟಾಗಿ ಆಚರಿಸಲು ಅನುಕೂಲವಾಗುವಂತೆ ವೇದಿಕೆ, ಮೆರವಣಿಗೆ, ಊಟೋಪಾಹಾರ, ವಸ್ತುಪ್ರದರ್ಶನ ಹೀಗೆ ಎಲ್ಲ ಉಪ ಸಮಿತಿಗಳನ್ನು ರಚಿಸಲಾಗುವುದು.
ಸಮಿತಿ ರಚನೆಯಾದ ಕೂಡಲೇ ಸದಸ್ಯರು ಕಾರ್ಯಾರಂಭಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಕುಸ್ತಿ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ವಿವರಿಸಿದರು.
ಕಿತ್ತೂರಿನಲ್ಲಿ ಅ.3 ರಂದು ಸಭೆ:
ಕಿತ್ತೂರು ಉತ್ಸವದ ಪೂರ್ವಸಿದ್ಧತೆ ಕುರಿತು ಸಾರ್ವಜನಿಕರೊಂದಿಗೆ ಚರ್ಚಿಸಲು ಪ್ರತಿವರ್ಷದಂತೆ ಕಿತ್ತೂರಿನಲ್ಲಿ ಅ.3 ರಂದು ಸಂಜೆ 4 ಗಂಟೆಗೆ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಮತ್ತೊಂದು ಸಭೆಯನ್ನು ಕರೆದು ವಿಸ್ತೃತವಾಗಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ, ಐದು ಕೋಟಿ ರೂಪಾಯಿ ಅನುದಾನ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಆದ್ದರಿಂದ ಕಳೆದ ಬಾರಿಯ ವೆಚ್ಚದ ಆಧಾರದ ಮೇಲೆ ಮುಂಚಿಯವಾಗಿಯೇ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು, ಕಿತ್ತೂರು ಉತ್ಸವದ ಕುರಿತು ಸಭೆಗೆ ಮಾಹಿತಿಯನ್ನು ನೀಡಿದರು.
ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
***
0 Comments