Bagalakote : ಜಿಲ್ಲೆಯಲ್ಲಿ ಬರ ಅಧ್ಯಯನ ಆರಂಭಿಸಿದ ಅಧಿಕಾರಿಗಳ ತಂಡ

ಜಿಲ್ಲೆಯಲ್ಲಿ ಬರ ಅಧ್ಯಯನ ಆರಂಭಿಸಿದ ಅಧಿಕಾರಿಗಳ ತಂಡ
ಬಾಗಲಕೋಟೆ:
ಜಿಲ್ಲೆಗೆ ಬರ ಅಧ್ಯಯನ ತಂಡ ಆಗಮಿಸಿದ್ದು, ಅಧಿಕಾರಿಗಳು ಬಾಗಲಕೋಟೆ ತಾಲೂಕಿನ ಹೊಸೂರ ಗ್ರಾಮದಿಂದ ಅಧ್ಯಯನ ಆರಂಭಿಸಿದ್ದಾರೆ.

ಕಾಲುವೆ ಇದ್ದರೂ ನೀರಿಲ್ಲ, ಭೂಮಿಯಿದ್ದರೂ ಬೆಳೆಯಿಲ್ಲದ ಭೀಕರ ಸ್ಥಿತಿಯ ಚಿತ್ರಣ ಆರಂಭದಲ್ಲೇ ಕೇಂದ್ರದ ಅಜಿತಕುಮಾರ್ ಸಾಹು ನೇತೃತ್ವದ  ಅಧಿಕಾರಿಗಳ ತಂಡದ ಕಣ್ಣಿಗೆ ಬಿದ್ದಿದೆ.

ಬಾಗಲಕೋಟೆ, ಹುನಗುಂದ, ಬಾದಾಮಿ ತಾಲೂಕಿನ ಹಲವು ಗ್ರಾಮಗಳಿಗೆ ತಂಡ ಭೇಟಿ ನೀಡಿ ಅಧ್ಯಯನ ಕೈಗೊಳ್ಳಲಿದೆ‌‌.
ಹೊಸೂರ ಗ್ರಾಮದ ದಾವಲಸಾಬ ಕಾಶಿನಕುಂಟೆ ಅವರ ಹೊಲಕ್ಕೆ ಹೊಂದಿಕೊಂಡು ಘಟಪ್ರಭಾ ಬಲದಂಡೆ ಕಾಲಿವೆಯಿದ್ದರೂ ಹನಿ ನೀರು ಹರಿದಿಲ್ಲ, ಕೈಗೆ ಬರಬೇಕಿದ್ದ ಕಬ್ಬು ಸಂಪೂರ್ಣ ಒಣಗಿ ನಿಂತಿದೆ.

ಅಧಿಕಾರಿಗಳ ಭೇಟಿ ಕುರಿತು *ಸಂಯುಕ್ತ ಕರ್ನಾಟಕ*  ದೊಂದಿಗೆ ಮಾತನಾಡಿದ ದಾವಲಸಾಬ್ ಕಾಶಿನಕುಂಟೆ ಅಧಿಕಾರಿಗಳ ಭೇಟಿ ಕೇವಲ ಮೂಗಿಗೆ ತುಪ್ಪ ಹಚ್ಚುವ ಕೆಲಸವಾಗಬಾರದು. ರೈತ ದೇಶದ ಬೆನ್ನೆಲುಬು ಎನ್ನುವುದು ಕೇವಲ ವಾಕ್ಯಕ್ಕೆ ಸೀಮಿತವಾಗಬಾರದು ರೈತರು ಕಂಗಾಲಾಗಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ನೆರವಿಗೆ ಧಾವಿಸಬೇಕಿರುವುದು ಸರ್ಕಾರದ ಕರ್ತವ್ಯ ಎಂದರು‌.

ನಂತರ ಚಿಟಗಿನಕೊಪ್ಪ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿದ ವೇಳೆ ತೊಗರಿ ಬೆಳೆ ಕಂಡರೂ ಅದಕ್ಕೆ ರೋಗಬಾಧೆ ಉಂಟಾಗಿರುವುದು ಕಂಡು ಬಂದಿತು. ತಂಡ ಅಲ್ಲಿಂದ ಆಗಮಿಸುವ ವೇಳೆ ಪಕ್ಕದ ಹೊಲದಲ್ಲಿ ಸಮೃದ್ಧವಾಗಿ ಕಬ್ಬು ಬೆಳೆದಿರುವುದನ್ನು ಗಮನಿಸಿದ ಅಜಯಕುಮಾರ ಸಾಹು ಕಾಲುವೆಯಲ್ಲಿ ನೀರು ಹರಿಯುತ್ತಿದ್ದರೂ ಬಳಸದಿದ್ದರೆ ಯಾರ ತಪ್ಪು ಎಂದು ಪ್ರಶ್ನಿಸಿದರು ಆಗ ರೈತರು ಇಂದಷ್ಟೇ ನೀರು ಬಿಟ್ಟಿದ್ದಾರೆ ಎಂದು ಹೇಳಿದ್ದು, ಜಿಲ್ಲಾಡಳಿತದ ಅಧಿಕಾರಿಗಳನ್ನು‌ ಮುಜುಗರಕ್ಕೆ ಸಿಲುಕಿಸಿತು.
ಕೇಂದ್ರ ಬರ ಅಧ್ಯಯನ ತಂಡಕ್ಕೆ ಸಂಸದ ಪಿ.ಸಿ‌.ಗದ್ದಿಗೌಡರ, ಶಾಸಕ ಎಚ್.ವೈ.ಮೇಟಿ ವಸ್ತುಸ್ಥಿತಿ ವಿವರಿಸಿದರು.

ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿಪಂ ಸಿಇಒ ಶಶಿಧರ ಕುರೇರ,  ಎಸಿ ಶ್ವೇತಾ ಬೀಡಿಕರ, ತಹಶಿಲ್ದಾರ ಅಮರೇಶ ಪಮ್ಮಾರ ಜಿಲ್ಲೆಯ ಬರದ ಚಿತ್ರಣ ವಿವರಿಸುವ ವರದಿ ನೀಡಿದರು.

Post a Comment

0 Comments