ಕಿತ್ತೂರು ವಿಜಯ ಸುದ್ದಿ
ಕನ್ನಡ ಸಾಹಿತ್ಯದ ಬಹುತ್ವದ ಸತ್ವ ನಾಡಿನ ಮನೆ ಮನಕ್ಕೆ ತಲುಪಲಿ: ಶ್ರೀ ಎಲ್.ಎನ್ ಮುಕುಂದರಾಜ್ ಅಧ್ಯಕ್ಷರು ,ಕರ್ನಾಟಕ ಸಾಹಿತ್ಯ ಅಕಾಡೆಮಿ , ಬೆಂಗಳೂರು ಚೆನ್ನಮ್ಮನ ಕಿತ್ತೂರು: ಜಾಗತಿಕ ಭಾಷೆಗಳಲ್ಲಿಯೇ ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ಮೇಳೈಸಿಕೊಂಡಿರುವ ಕನ್ನಡ ಭಾಷೆ , ಸಾಹಿತ್ಯದ ವೈಶಿಷ್ಟ್ಯತೆ ಮತ್ತು ವೈಚಾರಿಕತೆಯ ಚಿಂತನೆಗಳು ಸರ್ವರ ಮನೆ ಮನಕ್ಕೆ ತಲುಪಬೇಕೆಂದು ಬೆಂಗಳೂರು ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ ಹೇಳಿದರು.ಕನ್ನಡ ಸಾಹಿತ್ಯದ ನೆಲಮೂಲದ ಶ್ರಮ ಸಂಸ್ಕೃತಿಯ ಜೀವಂತಿಕೆಯನ್ನು ಪ್ರತಿನಿಧಿಸುವ ಬಹುತ್ವದ ಮೌಲ್ಯಗಳು ಸದ್ಯದ ಪ್ರಜಾಪ್ರಭುತ್ವದ ಆಶಯಗಳನ್ನು ಹೊಂದಿರುವುದರಿಂದ ಸಾಹಿತ್ಯವು ಜನಸಾಮಾನ್ಯರಿಗೆ ತಲುಪಬೇಕಿದೆ.ಈ ಮೂಲಕ ಸಾಮರಸ್ಯದ ಬದುಕನ್ನು ಕಟ್ಟಿಕೊಡುವ ತುರ್ತಿನಲ್ಲಿದ್ದೇವೆ ಎಂದು ನುಡಿದರು. ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದಲ್ಲಿ ನಡೆದ ಕನ್ನಡ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಬೆಳಗಾವಿ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಕನ್ನಡ ಕಾವ್ಯದ ಬಹುತ್ವದ ನೆಲೆಗಳು ವಿಷಯ ಕುರಿತು ಮಾತನಾಡಿದ ಅವರು, ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಚಾರಿತ್ರಿಕ ಅಂಶಗಳಿದ್ದು, ಕನ್ನಡ ಭಾರತಿ ಯೋಜನೆ ಮೂಲಕ ಅಕಾಡೆಮಿಯು ಪ್ರಚಾರ ಪ್ರಸಾರ ಪ್ರಕಟಣೆಗಳ ಮೂಲಕ ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡುತ್ತಿದೆ. ಮಹಿಳಾ ಮುನ್ನಡೆ ಎಂಬ ವಿಶೇಷ ಯೋಜನೆಯಡಿಯಲ್ಲಿ ೫೦ ಜನ ಮಹಿಳಾ ಸಾಧಕಿಯರ ಜೀವನ ಸಾಧನೆ ಕುರಿತಾಗಿ ಕೃತಿಗಳು ಮುದ್ರಣಕ್ಕೆ ಸಜ್ಜಾಗಿವೆ. ವಿದ್ಯಾರ್ಥಿಗಳು ಸೇರಿದಂತೆ ಇಡೀ ಸಮಾಜ ಸಾಹಿತ್ಯದತ್ತ ಒಲವು ಮೂಡಿಸಿಕೊಳ್ಳಬೇಕೆಂದು ಹೇಳಿದರು. ಸಂವಿಧಾನದ ನಿಜವಾದ ಆಶಯಗಳು ಸಮಾಜದ ಎಲ್ಲ ವರ್ಗಕ್ಕೂ ತಲುಪಬೇಕು ಅಂದಾಗ ನಾವು ಪಡೆದುಕೊಂಡ ಸ್ವಾತಂತ್ರ್ಯದ ಮಹತ್ವ ನಮಗೆ ತಿಳಿದುಕೊಳ್ಳಲು ಸಾಧ್ಯ ಇಲ್ಲವಾದರೆ ನಾವು ಗಳಿಸಿದ ಈ ಸ್ವಾತಂತ್ರ್ಯವನ್ನು ಮತ್ತೆ ಕಳೆದುಕೊಳ್ಳು ಅಪಾಯದ ಹಾದಿಯಲ್ಲಿ ಸಾಗುತ್ತಿರುವುದು ಖೇದಕರ ಸಂಗತಿ ಎಂದರು ಸಾನಿಧ್ಯ ವಹಿಸಿದ್ದ ಕಲ್ಮಠದ ಶ್ರೀ ಮಡಿವಾಳ ರಾಜಯೋಗೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಕನ್ನಡ ಸಾಹಿತ್ಯದ ವಿವಿಧ ಆಯಾಮಗಳನ್ನು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಅಕಾಡೆಮಿ ಮತ್ತು ಕಲ್ಮಠದಿಂದ ಶೀಘ್ರದಲ್ಲೇ ಕಾರ್ಯಗಾರ ಆಯೋಜಿಸಲಾಗುವುದು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ವೇದಿಕೆ ಜಿಲ್ಲಾ ಸಂಚಾಲಕ ಎಲ್.ಎಸ್. ಶಾಸ್ತ್ರಿ ಮಾತನಾಡಿ ವ್ಯಕ್ತಿತ್ವ ವಿಕಾಸಗೊಳಿಸಲು ಸಾವಿರಾರು ಪುಸ್ತಕಗಳು ಬರುತ್ತಿದ್ದು ಕೊಂಡು ಓದುವ ಹವ್ಯಾಸ ಮೈಗೂಡಿಸಿಕೊಂಡಾಗ ಸಾಹಿತ್ಯಕ್ಕೆ ಬೆಲೆ ಬಂದು ಲೇಖಕರ ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಪ್ರಾಸ್ತಾವಿಕ ಮಾತನಾಡುತ್ತ ಕನ್ನಡ ಸಾಹಿತ್ಯದ ಸೊಬಗು ಅಡಗಿರುವುದೇ ನಮ್ಮ ನೆಲದ ಜನಪದದ ಅಭಿವ್ಯಕ್ತಿಯಲ್ಲಿ.ಅಭಿಜಾತ ಸಾಹಿತ್ಯವಾದ ಜಾನಪದವು ಬಯಲು ಆಲಯ ವಿವೇಚನೆಯ ಬಹುದೊಡ್ಡ ಆಯಾಮಗಳನ್ನು ತನ್ನಲ್ಲಿ.ಗರ್ಭಿಕರಿಸಿಕೊಂಡಿದೆ.ಕವಿರಾಜಮಾರ್ಗಕಾರ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ಎಂದು ಹೇಳಿರುವುದು ಇದಕ್ಕೆ ಸಾಕ್ಷಿ .ಮಾರ್ಗಕಾರ ಹೇಳಿರುವಂತೆ ಕಸವರಮೆಂಬುದು ನೇರೆ ಸೈರಿಸಲಾರ್ಪಡೆ ಪರಧರ್ಮಮುಂ ಪರ ವಿಚಾರಮುಂ ಎಂದಿರುವುದರ ಅರ್ಥ ಗಮನಾರ್ಹವಾಗಿದೆ. ಐಶ್ವರ್ಯವೆಂದರೆ,ಪರರ ಧರ್ಮವನ್ನು ಮತ್ತು ಪರರ ವಿಚಾರಗಳನ್ನು ಗೌರವಿಸುವುದೇ ನಿಜವಾದ ಸಂಪತ್ತು ಎಂದಿದ್ದಾನೆ.ಇಂತಹ ಸೌಹಾರ್ದತೆ ಮತ್ತು ಬಹುತ್ವದ ಆಯಾಮಗಳನ್ನು ಹೊಂದಿರುವ ಕನ್ನಡ ಸಾಹಿತ್ಯದ ಕಂಪನ್ನು ಇಂಪನ್ನು ಚಕೋರ ವೇದಿಕೆಯಿಂದ ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಕಾಲೀನ ಸಾಮಾಜಿಕ ಬಿಕ್ಕಟ್ಟುಗಳನ್ನು ಮೀರಿಬೇಕಿದೆ ಎಂದು ಹೇಳಿದರು.ಡಾ. ಪ್ರಜ್ಞಾ ಮತ್ತಿಹಳ್ಳಿಯವರು ಹಳಗನ್ನಡ ಕಾವ್ಯಗಳಲ್ಲಿ ರಸಗ್ರಹಣದ ಮಹೋನ್ನತಿ ವಿಷಯ ಕುರಿತು ಮಾತನಾಡುತ್ತ ಕುಮಾರವ್ಯಾಸನ ಭಾರತ ಮತ್ತು ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿನ ವೀರ ಕರುಣ ರೌದ್ರ ಭೀಭತ್ಸ ಶಾಂತ ರಸಗಳ ಅಭಿವ್ಯಕ್ತಿಗಳನ್ನು ಮನಂಬುಗುವಂತೆ ಪದ್ಯಗಳ ಮುಖಾಂತರ ವಿಶ್ಲೇಷಿಸಿದರು. ಕಸಾಪ ತಾಲೂಕು ಅಧ್ಯಕ್ಷ ಡಾ. ಎಸ್. ಬಿ.ದಳವಾಯಿ, ಉಪ ಪ್ರಾಚಾರ್ಯ ಮಹೇಶ ಚೆನ್ನಂಗಿ ಅತಿಥಿಗಳಾಗಿದ್ದರು. ಸಂಚಾಲಕ ನಾಗೇಶ ನಾಯಕ ಸ್ವಾಗತಿಸಿದರು. ಶಿಕ್ಷಕ ಈಶ್ವರ ಗಡಿಬಿಡಿ ಪ್ರಾರ್ಥನಾ ಗೀತೆ ಹಾಡಿದರು. ಕಸಾಪ ತಾಲ್ಲೂಕು ಮಾಜಿ ಅಧ್ಯಕ್ಷ ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ಪ್ರಾಧ್ಯಾಪಕ ಸಂಜೀವ ಲದ್ದಿ ಮಠ ವಂದಿಸಿದರು.
ಕಿತ್ತೂರು ವಿಜಯ ಸುದ್ದಿ ಚನ್ನಮ್ಮನ ಕಿತ್ತೂರು.
0 Comments