ಕಿತ್ತೂರು ವಿಜಯ. ಸುದ್ದಿ ಚನ್ನಮ್ಮನ ಕಿತ್ತೂರು ವಿಠ್ಠಲ ದೇವಸ್ಥಾನ: ಆಡಳಿತಾಧಿಕಾರಿಯಾಗಿ ತಹಶೀಲ್ದಾರ್ ಅಧಿಕಾರ ಸ್ವೀಕಾರ
ಚನ್ನಮ್ಮನ ಕಿತ್ತೂರು: ಸ್ಥಳೀಯ ಗದ್ದಿಓಣಿಯಲ್ಲಿರುವ ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ನೋಂದಣಿಯಾದ ಶ್ರೀವಿಠ್ಠಲ ದೇವರ ದೇವಸ್ಥಾನದ ಆಡಳಿತಾಧಿಕಾರಿಯಾಗಿ ತಹಶೀಲ್ದಾರ್ ರವೀಂದ್ರ ಹಾದಿಮನಿ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
ಈಚೆಗೆ ಹೈಕೋರ್ಟ್ ಆದೇಶ ನೀಡಿ ದೇವಸ್ಥಾನದ ಅನಧಿಕೃತ ಕಮೀಟಿಯನ್ನು ರದ್ದುಪಡಿಸಿತ್ತು. ಹಾಗಾಗಿ ಬೆಳಗಾವಿ ಜಿಲ್ಲಾಧಿಕಾರಿಯವರು ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿದ್ದರಿಂದ ತಹಶೀಲ್ದಾರ್ ಅಧಿಕಾರ ಸ್ವೀಕರಿಸಿದರು ಎಂದು ಕಚೇರಿ ಮೂಲವೊಂದು ತಿಳಿಸಿದೆ.
ಅಧಿಕಾರ ಸ್ವೀಕರಿಸಿದ ತಹಶೀಲ್ದಾರ್ ಅವರು ಬೆಳ್ಳಿ, ಬಂಗಾರ, ಒಡವೆ ಅದಕ್ಕೆ ಸಂಬಂಧಪಟ್ಟ ಎಲ್ಲ ವಸ್ತು ಮತ್ತು ಆಸ್ತಿಗಳನ್ನು ಇದೇ 28ನೇ ತಾರೀಕಿಗೆ ಕಾನೂನು ಪ್ರಕಾರ ನನಗೆ ಒಪ್ಪಿಸಬೇಕೆಂದು ಸೂಚಿಸಿದರು. ಪ್ರತಿ ವರ್ಷ ಮಳಿಗೆ ಬಾಡಿಗೆಯಿಂದ ಬರುತ್ತಿದ್ದ ಸುಮಾರು 11 ಲಕ್ಷ ಹಣವನ್ನು ಲಿಸ್ಟಿನಲ್ಲಿ ಮರೆಮಾಚಿದ್ದರು. ತಕ್ಷಣ ಹನುಮಂತ ಕೊಟಬಾಗಿಯವರು ಇದರಲ್ಲಿ ಮಳಿಗೆಗಳಿಂದ ಬಂದ ದುಡ್ಡಿನ ವಿವರ ಬರೆದಿಲ್ಲ ತಕ್ಷಣ ಬರೆಯಿರಿ ಮತ್ತು ಅದರ ಆದಾಯವನ್ನು ತಿಳಿಸಿರಿ ಎಂದು ಹೇಳಿದರು.
ಇದನ್ನು ಗಮನಿಸಿದ ತಹಶೀಲ್ದಾರ್ ಅವರು, ‘ಎಷ್ಟು ಮಳಿಗೆಗಳಿವೆ, ಅದರಿಂದ ಆದಾಯ ಎಷ್ಟು ಬರುತ್ತದೆ ಎಂದು ನೇರವಾಗಿ ಕೇಳಿದರು. ಮಳಿಗೆಗಳಿಂದ ವರ್ಷಕ್ಕೆ 11 ಲಕ್ಷ ಆದಾಯವಿದೆ ಎಂದು ಹಂಗಾಮಿ ಕಾರ್ಯದರ್ಶಿ ಪ್ರಹ್ಲಾದ ಶಿಗ್ಗಾವಿ ಉತ್ತರಿಸಿದರು.
ಎಷ್ಟು ಆಸ್ತಿ ಇದೆ ಹೇಳಲೇಬೇಕು. ಯಾವುದನ್ನು ಮರೆಮಾಚುವಂತಿಲ್ಲ. ಇದು ಸರಕಾರದ ಆದೇಶವಾಗಿದ್ದು, ಎಲ್ಲರೂ ಪಾಲಿಸಲೇಬೇಕು. ಕೈಗಡವಾಗಿ ಐವತ್ತು ನಾಲ್ಕು ಸಾವಿರ ರೂಪಾಯಿ ಹಣವನ್ನು ಯಾಕೆ ಇಟ್ಟುಕೊಂಡಿದ್ದೀರಿ ತಕ್ಷಣ ಅದನ್ನ ಜಮಾ ಮಾಡಿ ಇಲ್ಲವೇ ನಿಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಹಶೀಲ್ದಾರ್ ಖಾರವಾಗಿ ತಿಳಿಸಿದರು.
ಇದು ಸಾರ್ವಜನಿಕರ ಹಣ, ಇದನ್ನ ಯಾಕೆ ಇಟ್ಟುಕೊಂಡಿದ್ದೀರಿ? ಬಾಡಿಗೆ ಕೈಯಲ್ಲಿ ಯಾಕೆ ಇಸ್ಕೊಂಡಿದ್ದೀರಿ? ಚೆಕ್ ಮುಖಾಂತರ ಸಂದಾಯ ಮಾಡಬೇಕಿತ್ತು. ಬಾಡಿಗೆದಾರರು ಅವರ ಮೇಲೆ ಒತ್ತಡ ತಕೊಂಡು ಲಕ್ಷಗಟ್ಟಲೆ ಕೈಗಡ ಯಾಕೆ ಇಸಿದುಕೊಂಡಿದ್ದೀರಿ. ತಕ್ಷಣ ಅದನ್ನು ಬ್ಯಾಂಕಿಗೆ ತುಂಬಿ, ಇಲ್ಲವಾದರೆ ನಿಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಭೆಯಲ್ಲಿ ಎಚ್ಚರಿಕೆ ನೀಡಿದರು.
ಬಾಡಿಗೆದಾರರು ಯಾರ ಕೈಯಲ್ಲೂ ಹಣ ಕೊಡಬಾರದು. ನೇರವಾಗಿ ದೇವಸ್ಥಾನದ ಬ್ಯಾಂಕಿನ ಅಕೌಂಟಿಗೆ ತುಂಬಬೇಕು ಎಂದು ದೇವಸ್ಥಾನ ಟ್ರಸ್ಟಿನ ಎಲ್ಲ ಬಾಡಿಗೆದಾರರಿಗೆ ಸೂಚನೆ ನೀಡಿದರು.
ಬಾಡಿಗೆದಾರರಿಗೆ ನೀವು ಯಾರ ಕೈಯಲ್ಲಿ ದುಡ್ಡು ಕೊಟ್ಟಿದ್ದೀರ ಅದನ್ನ ಅವರ ಕಡೆಯಿಂದ ಹಿಂಪಡೆದು ತಕ್ಷಣ ಬ್ಯಾಂಕಿನ ಅಕೌಂಟಿಗೆ ತುಂಬಿ ಎಂದೂ ಇದೇ ವೇಳೆ ತಿಳಿಸಿದರು.
ಬರುವ 28ರೊಳಗೆ ಟ್ರಸ್ಟಿನ ಬಾಕಿ ಇರುವ ಅಂಗಡಿಕಾರರ ಹಣವನ್ನ ವಸೂಲ್ ಮಾಡಿ ತಕ್ಷಣ ಬ್ಯಾಂಕಿಗೆ ತುಂಬಬೇಕು ಈ ವರ್ಷವೂ ಸಹಿತ 10% ಹೆಚ್ಚಿಗೆ ಮಾಡಿರುವ ಹಣವನ್ನು ಬಾಡಿಗೆದಾರರು ತುಂಬಿಲ್ಲ. ಅದನ್ನು ಸಹಿತ ವಸೂಲ್ ಮಾಡಿ ಬ್ಯಾಂಕಿಗೆ ಕಟ್ಟಿ, 28ನೇ ತಾರೀಕಿಗೆ ನನಗೆ ತಿಳಿಸತಕ್ಕದ್ದು. ನನಗೆ ಯಾರದೇ ಮುಲಾಜು ಇಲ್ಲ. ಇದು ದೇವರ ಸೇವೆ. ದೇವರ ಅಭಿವೃದ್ಧಿಗೆ ಮಾತ್ರ ಇಲ್ಲಿಯ ಹಣ ಸೀಮಿತವಾಗಿರಬೇಕು ಇದು ನನ್ನ ಸ್ಪಷ್ಟ ಸೂಚನೆಯಾಗಿದೆ ಎಂದೂ ತಿಳಿಸಿದರು.
ದೇವಸ್ಥಾನದ ಆರ್ಥಿಕ ವ್ಯವಹಾರ ಪರಿಶುದ್ಧವಾಗಿರಬೇಕು ದೇವಸ್ಥಾನದಿಂದ ನಾವು ಏನನ್ನು ತೆಗೆದುಕೊಂಡು ಹೋಗಬಾರದು, ದೇವಸ್ಥಾನಕ್ಕೆ ನಮ್ಮದನ್ನ ದಾನವಾಗಿ ಕೊಡಬೇಕು ಎಂದು ಹೇಳಿದರು.
ನಮ್ಮ ಜಿಲ್ಲಾಧಿಕಾರಿಗಳು ನನಗೆ ಈ ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ. ನಿಮ್ಮೆಲ್ಲರ ಸಹಕಾರದಿಂದ ಪ್ರಾಮಾಣಿಕವಾಗಿ ದೇವರ ಸೇವೆ ಮಾಡುತ್ತೇನೆಂದು ಹೇಳಿದರು. ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಬ್ರಾಹ್ಮಣ ಸಮಾಜದ ಹಿರಿಯರಾದ ಹಣಮಂತ ಕೊಟಬಾಗಿಯವರು ಹಾಗೂ ಅಧಿಕಾರ ಕೊಟ್ಟ ಶ್ರೀ ನರಸಿಂಹ ನಾಯಕ, ಅನೇಕ ಭಕ್ತರು ಹಾಜರಿದ್ದರು.
ಸುಮಾರು ವರ್ಷಗಳಿಂದ ನಡೆದ ವಿಠಲ ದೇವಸ್ಥಾನದ ಟ್ರಸ್ಟ್ ನ ಅವ್ಯವಾರಗಳ ವಿರುದ್ಧ ಹನುಮಂತ್ ಕೊಟಬಾಗಿ, ಗುರುರಾಜ ಕುಲಕರ್ಣಿ ಹಾಗೂ ಶ್ರೀರಂಗ ಇನಾಮದಾರ್ ಹೈಕೋರ್ಟ್ ಮೆಟ್ಟಿಲೇರಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
*****
0 Comments