ಕಿತ್ತೂರು ವಿಜಯ ಸುದ್ದಿ. ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟನಾ ಸಮಾರಂಭದಲ್ಲಿ ಸಂಘಟನಾತ್ಮಕ ಹೋರಾಟದಿಂದ ಹೆಚ್ಚು ಬಲ: ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ


 ಕಿತ್ತೂರು ವಿಜಯ ಸುದ್ದಿ.*ಬೆಳಗಾವಿ:* ವೈಯಕ್ತಿಕವಾಗಿ ಹೋರಾಟ ಮಾಡುವುದಕ್ಕಿಂತ ಸಂಘಟನಾತ್ಮಕವಾಗಿ ಹೋರಾಡಿದರೆ ಹೆಚ್ಚು ಬಲ ಬರುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಅಭಿಪ್ರಾಯಪಟ್ಟರು.‌ ‌

ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಜರ್ನಲಿಸ್ಟ್ ಅಸೋಸಿಯೇಷನ್ ನ ನೂತನ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ವೈಯಕ್ತಿಕವಾಗಿ ಹೋರಾಟ ಮಾಡುವಾಗ ಜವಾಬ್ದಾರಿ ಕಡಿಮೆ ಇರುತ್ತದೆ. ಸಂಘಟನೆ ಮೂಲಕ ಹೋರಾಟ ಮಾಡಿದರೆ ಹೆಚ್ಚು ಬಲ ಬರುತ್ತದೆ, ಜವಾಬ್ದಾರಿಯೂ ಹೆಚ್ಚಾಗಿರುತ್ತದೆ ಎಂದು ಹೇಳಿದರು. ‌

ಪದಾಧಿಕಾರಿಗಳು, ಜವಾಬ್ದಾರಿ ಸ್ಥಾನದಲ್ಲಿರುವ ಜನರೊಂದಿಗೆ ಸೇರಿ ಸಂಘಟನೆ ಮಾಡಿದರೆ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಬಹುದು, ಇದರಿಂದ ಸಂಘಟನೆಗೆ ಹೆಚ್ಚು ಅನುಕೂಲ. ಸಂಘಟನೆ ಮಾಡಿದ ಮೇಲೆ ಪದಾಧಿಕಾರಿಗಳಿಗೆ ಜವಾಬ್ದಾರಿ ಹೆಚ್ಚುತ್ತದೆ ಎಂದರು. 

ಬೆಳಗಾವಿ ಜಿಲ್ಲೆ ಇಡೀ ಕರ್ನಾಟಕಕ್ಕೆ ಅತಿ ದೊಡ್ಡ ಜಿಲ್ಲೆ, ಇಲ್ಲಿ‌ ಇಂಥ ಸಂಘಟನೆ ಆರಂಭವಾಗುತ್ತಿರುವುದು ಖುಷಿಯ ವಿಚಾರ. ಸಂಘಟನೆಗೆ ನಮ್ಮ ಸಹಕಾರ ಯಾವತ್ತೂ ಇರುತ್ತದೆ, ಜಿಲ್ಲೆಯ ಸಚಿವರು, ಶಾಸಕರು, ಜಿಲ್ಲಾಡಳಿತ ನಿಮ್ಮೊಂದಿಗೆ ಇರುತ್ತದೆ ಎಂದು ಚನ್ನರಾಜ್ ಹಟ್ಟಿಹೊಳಿ ತಿಳಿಸಿದರು. 

ಪತ್ರಕರ್ತರು ಸೂಕ್ಷ್ಮ ವಿಚಾರಗಳನ್ನು ಸೂಕ್ಷ್ಮವಾಗಿ‌ ನಿಭಾಯಿಸಬೇಕು, ಪ್ರಜಾಪ್ರಭುತ್ವದ‌ ರಕ್ಷಕರಾಗಿ ಕೆಲಸ ಮಾಡಬೇಕು, ಕೆಲವೊಂದು ಘಟನೆಗಳನ್ನು ಸೂಕ್ಷ್ಮವಾಗಿ ನೋಡಿ ಪಾರದರ್ಶಕವಾಗಿ ಪ್ರಸಾರ ಮಾಡಬೇಕು.‌ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ನಿಮಗೆ ಶುಭಾಶಯಗಳನ್ನು ಕಳುಹಿಸಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನಿಮ್ಮ ಸೇವೆ ವಿಸ್ತರಿಸಲಿ ಎಂದು ಹಾರೈಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕರಾದ ಆಸೀಫ್ ಸೇಠ್, ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಕಮಿಷನರ್ ಯಡಾ ಮಾರ್ಟೀನ್, ಎಸ್ಪಿ ಭೀಮಾಶಂಕರ್ ಗುಳೇದ, ಪಾಲಿಕೆ ಆಯುಕ್ತೆ ಶುಭಾ, ಸಂಘದ ಪದಾಧಿಕಾರಿಗಳು ಇದ್ದರು.

Post a Comment

0 Comments